ದಿನಾಂಕ 5.04.2023 ಮತ್ತು 6.04.2023 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೈಕಂಪಾಡಿ( ಮೀನುಗಾರಿಕೆ) ಇಲ್ಲಿನ 5ನೇ ತರಗತಿಯಿಂದ 7ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಎರಡು ದಿನದ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ನಂತರ ಮಕ್ಕಳ ಪರಿಚಯವನ್ನು ಮಾಡಿ ಅವರನ್ನು ನಾಲ್ಕು ಗುಂಪುಗಳನ್ನಾಗಿ ಮಾಡಿ ತಮ್ಮ ಗುಂಪಿನಲ್ಲಿ ಒಂದು ನಾಯಕನನ್ನು ಆರಿಸಿ ಆಟದ ಮೂಲಕ ಚಟುವಟಿಕೆಯನ್ನು ನಡೆಸಲಾಯಿತು. ನಂತರ ಶ್ರೀಮತಿ ನಳಿನಿ ಹಾಗೂ ರೆನಿಲ್ಲಾ ರೋಶ್ನಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ನಾಯಕತ್ವ, ಗುರಿ- ಉದ್ದೇಶ , ಆರೋಗ್ಯ-ಸ್ವಚ್ಛತೆ ಮೊದಲಾದವುಗಳ ಬಗ್ಗೆ ಮಾಹಿತಿ ನೀಡಿದರು. ಕಥೆಗಳ ಮೂಲಕ ನೀತಿ, ಮೌಲ್ಯಗಳ ಬಗ್ಗೆ ತಿಳಿಸಲಾಯಿತು. ಮಕ್ಕಳಿಂದ ಹಾಡು, ನೃತ್ಯ, ಕಿರು ನಾಟಕಗಳನ್ನು ಮಾಡಿಸಿ ಅಂದಿನ ಶಿಬಿರವನ್ನು ಮುಕ್ತಾಯಗೊಳಿಸಲಾಯಿತು.
ಶಿಬಿರದ ಎರಡನೇ ದಿನ ಸಹೋದಯ ಸಂಸ್ಥೆಯ ಸಂಯೋಜಕರಾದ ಭ| ಲೀನಾ ಡಿ ಕೋಸ್ಟ ಇವರು ಮಕ್ಕಳಿಗೆ ಮೌಲ್ಯಗಳು ಹಾಗೂ ಸಮಯದ ಸದುಪಯೋಗದ ಬಗ್ಗೆ ಮಾಹಿತಿ ನೀಡಿದರು. ನಂತರ ರೋಶನಿ ನಿಲಯ ಇಲ್ಲಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರಾದ ಕು| ಮೇಘ, ಕು| ನಮನ, ಕು| ಅಶ್ವಿನಿ ಇವರು ಮೊಬೈಲ್ ದುರ್ಬಳಕೆ ಬಗ್ಗೆ ಮಾಹಿತಿ ನೀಡಿದರು. ಹಾಗೂ ಮಕ್ಕಳನ್ನು 6 ಗುಂಪುಗಳನ್ನಾಗಿ ಮಾಡಿ ತಮ್ಮ ಗುಂಪಿಗೆ ಒಂದು ನಾಯಕನನ್ನು ಆರಿಸಿ ಗುಂಪುಗಳಿಗೆ ಒಂದೊಂದಾಗಿ ವಿಷಯವನ್ನು ನೀಡಿ ಅದಕ್ಕೆ ಅನುಗುಣವಾಗಿ ಕಿರು ನಾಟಕವನ್ನು ತಯಾರಿಸಿ ಪ್ರದರ್ಶಿಸುವಂತೆ ಹಾಗೂ ಪ್ರತಿ ಆರು ಗುಂಪಿನ ವಿದ್ಯಾರ್ಥಿಗಳಿಗೆ ವಾರ್ತಾ ಪತ್ರಿಕೆಯನ್ನು ನೀಡಿ ಅದರಲ್ಲಿ ತಮಗೆ ತಿಳಿದಿರುವ ವ್ಯಕ್ತಿಗಳ ವೇಷ ಭೂóಷಣವನ್ನು ತಯಾರಿಸಿ ಅದರ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ವಿವರಿಸುವಂತೆ ತಿಳಿಸಲಾಯಿತು. ಉತ್ತಮವಾಗಿ ಪ್ರದರ್ಶನವನ್ನು ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಸಹೋದಯ ಬೆಥನಿ ಸೇವಾ ಕೇಂದ್ರದ ಕಾರ್ಯಕರ್ತೆಯರಾದ ಶ್ರೀಮತಿ ರೆನಿಲ್ಲಾ ರೋಶ್ನಿ, ಕು| ರಂಜಿನಿ, ಶಿಕ್ಷಕ ವೃಂದದವರು ಮೊದಲಾದವರು ಉಪಸ್ಥಿತರಿದ್ದರು. ಶ್ರೀಮತಿ ಜಯಲಕ್ಷ್ಮೀ (ಮುಖ್ಯ ಶಿಕ್ಷಕರು) ಇವರು ಶಿಬಿರವನ್ನು ಉದ್ದೇಶಿಸಿ ಮುಂದೆಯೂ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡುವಂತೆ ಹಾಗೂ ತಾವು ಕೈಗೊಳ್ಳುವ ಕಾರ್ರ್ಯಕ್ರಮಗಳು ಉತ್ತಮವಾಗಿ ನಡೆಯಲಿ ಎಂದು ಶುಭಹಾರೈಸಿದರು. ಮಕ್ಕಳಿಗೆ ಸಿಹಿಯನ್ನು ಹಂಚಿ ಶಿಬಿರವನ್ನು ಮುಕ್ತಾಯಗೊಳಿಸಲಾಯಿತು.